ಅದೊಂದು ಸರ್ಕಾರಿ ಪ್ರಾಥಮಿಕ & ಮಾಧ್ಯಮಿಕ ಶಾಲೆ..
ಗುರುಗಳು ಮಕ್ಕಳಿಗೆ ಒಂದು ಪುಟ್ಟ ಪ್ರಶ್ನೆಯನ್ನಿಟ್ಟಿದ್ದರು
Team of Invincible's ಅಂದ್ರೆ ಏನು?
ಎಲ್ಲಾ ಹುಡುಗರು ಮನಸ್ಸಿಗೆ ತೋಚಿದ ಉತ್ತರ ನೀಡಿದರು.. ಸಮಾಧಾನವಾಗಲಿಲ್ಲ ಗುರುಗಳಿಗೆ.. ಏನೋ ಇನ್ನೂ ಹೊಸ ರೀತಿಯ ಉತ್ತರ ಬೇಕಿತ್ತು.. ಮಕ್ಕಳಿಗೆ ಒಂದು ದಿನದ ಸಮಯ ನೀಡಿದರು..
ಮಾರನೇ ದಿನ ಹುಡುಗರು ಉತ್ಸುಕರಾಗಿ.. ಶಾಲೆಯ ಕಡೆಗೆ ನುಗ್ಗಿದರು.. ಶಾಲೆಯ ಘಂಟೆ ಬಾರಿಸಿತು.. !
"ಸ್ವಾಮಿ ದೇವನೇ ಲೋಕಪಾಲನೆ ತೇ ನಮಸ್ತೇ ನಮೋಸ್ತುತೆ, ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೆ" ಸುಶ್ರಾವ್ಯವಾಗಿ ಪ್ರಾರ್ಥನೆ ಗೀತೆ ಹಾಡಿದರು..
"ಮಕ್ಕಳ.. ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತೇ.. ?"
ಮುಂದಿನ ಬೆಂಚಿನ ಹುಡುಗರು ಜೋರಾಗೆ "ಗುರುಗಳೇ ಸಿಕ್ಕಿತು.." ಎಂದರು..
"ಸರಿ ಯಾರು ಹೇಳುತ್ತೀರಾ ಹೇಳಿ"
"ಗುರುಗಳೇ.. ಒಬ್ಬರು ಹೇಳೊಲ್ಲ.. ಬದಲಿಗೆ ಒಂದು ಪುಟ್ಟ ಸ್ಕಿಟ್ ಮಾಡುತ್ತೇವೆ.. ನೀವೇ ನೋಡಿ ಹೇಳಿ.. "
ಗುರುಗಳಿಗೆ ಅಚ್ಚರಿ.. ಸರಿ ಎಂದು ತಮ್ಮ ಕುರ್ಚಿ ಬಿಟ್ಟ.. "ಒಯೆ ಮರಿ ಆ ಕಡೆ ಜರುಗು. ನಾ ಇಲ್ಲಿಯೇ ಕೂತು ನೋಡುತ್ತೇನೆ" ಅಂತ ಮುಂದಿನ ಬೆಂಚಿನಲ್ಲಿ ಜಾಗ ಮಾಡಿಕೊಂಡು ಕೂತರು..
ಸುಮಾರು ಹುಡುಗರು ಜೊತೆ ಒಬ್ಬ ಹುಡುಗಿ ಎದ್ದು ನಿಂತು.. ಮಾಸ್ತರ ಮುಂದೆ ನಿಂತು ತಲೆ ಬಾಗಿ ನಮಿಸಿ. .ಶುರು ಮಾಡಿದರು..
"ಕನ್ನಡ ನಾಡು, ನುಡಿ, ಜಲ ಇವೆಲ್ಲಾ ಒಂದು ಸ್ಫೂರ್ತಿ ನೀಡುವ ಶಕ್ತಿಗಳು.. ನಾವೆಲ್ಲಾ ಇಂದು ಒಂದಾಗಿದ್ದೇವೆ.. ನಮ್ಮ ಮಾತೃಭಾಷೆಗಳು ಬೇರೆ ಬೇರೆ.. ಆದರೆ ನಮ್ಮೆಲ್ಲರ ಮನ ಮಿಡಿಯುವುದು ಕರುನಾಡ ಭಾಷೆ ಕನ್ನಡಕ್ಕಾಗಿ..ಅನೇಕ ಮಹಾಕವಿಗಳು, ಜ್ಞಾನವಂತರು, ಸಂತರು, ಋಷಿಮುನಿಗಳು ನೆಡೆದಾಡಿದ ಈ ನಾಡಿನಲ್ಲಿ ಕನ್ನಡ ಭಾಷೆ ಆಲದ ಮರದ ಹಾಗೆ ಆಳವಾಗಿ ಬೇರೂರಿದೆ.. ಬಿಳುಲುಗಳು ಅಕ್ಕ ಪಕ್ಕ ಹರಡಿಕೊಂಡು ವಿಸ್ತಾರವಾಗುತ್ತಿದೆ.. ಇದು ನನ್ನೊಬ್ಬಳ ಪರಿಶ್ರಮವಲ್ಲ.. ಜೇನುಗೂಡಿನಲ್ಲಿ ಅನೇಕ ನೊಣಗಳು ಹೂವುಗಳ ಮಕರಂದ ಹೀರಿ ಹೀರಿ ಗೂಡು ಕಟ್ಟುವ ಹಾಗೆ ನನ್ನ ಜೊತೆ ಮುಂಬೈಯಿಂದ ಬಂದಿರುವ ಅಶೋಕ್ ಶೆಟ್ಟಿ ಇದ್ದಾರೆ, ಕರಾವಳಿ ಪ್ರದೇಶದಿಂದ ಬಂದ ಮಹೇಶ್ ಮೂರ್ತಿ ಇದ್ದಾರೆ, ಭದ್ರಾವತಿಯಿಂದ ಸತೀಶ್ ನಾಯಕ್ ಇದ್ದಾರೆ, ಬೆಂಗಳೂರಿನಲ್ಲಿ ಇರುವ ಗೋಪಿನಾಥ್, krhalli ಅಂತ ಹೆಸರಿನಲ್ಲಿ ಸೇರಿಸಿಕೊಂಡಿರುವ ನವೀನ್ ಇದ್ದಾರೆ, ಚಿಕ್ಕಬಳ್ಳಾಪುರದಿಂದ ಜೆವಿಎಮ್ ನಾಯ್ಡು ಬಂದಿದ್ದಾರೆ, ಸಂಕೋಚ ಸ್ವಭಾವದ ಪ್ರದೀಪ್ ರಾವ್ ನಮ್ಮ ಜೊತೆ ಇರುತ್ತಾರೆ, ನಮ್ಮದೇ ಸಂಸ್ಕೃತಿ ಎನ್ನುವ ಪ್ರಮೋದ್ ಶ್ರೀನಿವಾಸ, ಶೃಂಗೇರಿಯಿಂದ ಅರುಣ್, ಸುಂದರ ಮಲೆನಾಡಿನ ಭರತ್ ಆರ್ ಭಟ್, ಹೊಸ ಹೊಸ ಆಲೋಚನೆಯ ನೂತನ್ ಇವೆಲ್ಲರ ಬೃಹತ್ ಪರಿಶ್ರಮದ ಜೊತೆಯಲ್ಲಿ ಅಳಿಲು ಸೇವೆ ಮಾಡುತ್ತಾ ಇರುವ ನನ್ನನ್ನು ರೂಪ ಸತೀಶ್ ಎಂದು ಗುರುತಿಸುತ್ತಾರೆ..
ಅನ್ಯ ಭಾಷಿಕರ ಮಧ್ಯೆ ಕನ್ನಡತನವನ್ನು ಉಳಿಸಲು ಹೀಗೆ ಹುಟ್ಟಿಕೊಂಡ ಗುಂಪು.. ೩ಕೆ
ಅರ್ಥಾತ್
ಕನ್ನಡ
ಕವಿತೆ
ಕಥನ ..
ಎಲ್ಲರೂ ಒಂದುಗೂಡುತ್ತೇವೇ, ಚರ್ಚಿಸುತ್ತೇವೆ, ಒಂದು ಕಾರ್ಯಕ್ರಮಕ್ಕೆ ಸಿದ್ಧವಾಗುತ್ತೇವೆ.. ಅದನ್ನು ಅಷ್ಟೇ ನಾಜೂಕಾಗಿ ಕಾರ್ಯಗತಗೊಳಿಸುತ್ತೇವೆ.. ಇದು ನಮ್ಮ ಭಾಷೆಯನ್ನ ಉಳಿಸುವ ಕಾರ್ಯಕ್ರಮ ಅಂತಲ್ಲ.. ನಮ್ಮ ಭಾಷೆಯನ್ನು ಬೆಳೆಸುವ ಕಾರ್ಯಕ್ರಮ.. ನಮ್ಮ ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವ ಕಾರ್ಯಕ್ರಮ.. ಸಾಧಕರನ್ನು ಗುರುತಿಸಿ ಅವರಿಗೆ ನಮ್ಮ ಕೈಲಾದ ಮಟ್ಟಿಗೆ ಒಂದು ಪುಟ್ಟ ಸಮಾರಂಭ ಮಾಡಿ ನಲಿಯುತ್ತೇವೆ, ಸಂಭ್ರಮಿಸುತ್ತೇವೆ. ಅವರ ಕಣ್ಣಲ್ಲಿ ಆನಂದ ಭಾಷ್ಪಗಳು ಬಂದಾಗ ನಮ್ಮ ಪರಿಶ್ರಮ ಸಾರ್ಥಕ ಅನ್ನಿಸುತ್ತೆ.. ಭಾವಸಿಂಚನ, ಶತಮಾನಂಭವತಿ, ಹೊಂಗೆಮರದಡಿ ನಮ್ಮ ನಿಮ್ಮ ಕಥೆಗಳು.. ಹೀಗೆ ಮೂರು ಸಂಕಲನಗಳು ಬಂದಿವೆ.. ಕವಿಗೋಷ್ಠಿ ನೆಡೆದಿದೆ, ಜಾನಪದ ಕಲೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಒಂದು ಪುಟ್ಟ ಪ್ರಯತ್ನ ನೆಡೆದಿದೆ.. ಗಂಡುಕಲೆಯೆಂದೇ ಹೆಸರಾಗಿರುವ ಯಕ್ಷಗಾನದ ಒಂದು ತುಣುಕನ್ನು ನಮ್ಮ ಕಾರ್ಯಕ್ರಮದಲ್ಲಿ ಮೂಡಿಸಿದ್ದೇವೆ.. ಪುಸ್ತಕ ಬಿಡುಗಡೆ ನೆಡೆಸಿದ್ದೇವೆ.. ಹೀಗೆ ನಮ್ಮ ಕೈಲಾದಷ್ಟು ಮಟ್ಟಿಗೆ ತಾಯಿ ಭುವನೇಶ್ವರಿಗೆ ನಮ್ಮ ಪೂಜೆ ಸಾಗಿದೆ.. "
ಇಷ್ಟು ಹೇಳಿ ಒಂದು ಲೋಟ ನೀರನ್ನು ಕುಡಿದು.. ಗುರುಗಳೇ ಹೇಗಿದೆ.. ಇಂಥ ತಂಡವನ್ನು ಸೋಲಿಲ್ಲದ ತಂಡ ಅರ್ಥ ಸೋಲಿಸಲಾಗದ ತಂಡ ಅಲಿಯಾಸ್ Team of Invincible's ಅಂತಾರೆ.. ಹೇಗಿದೆ ಗುರುಗಳೇ.. ಇದು ನಿಮ್ಮ ಪ್ರಶ್ನೆಗೆ ಉತ್ತರವಾಗಿರಬಹುದಾ?"
ಗುರುಗಳು.. ಕಣ್ಣುಗಳಿಂದ ಜಾರುತ್ತಿರುವ ಆನಂದಭಾಷ್ಪವನ್ನು ಕರವಸ್ತ್ರದಿಂದ ಒರೆಸಿಕೊಂಡು.. ಕನ್ನಡ ಸರಿಮಾಡಿಕೊಂಡು.. ಹಾರುತ್ತಿದ್ದ ಕೂದಲನ್ನು ಒಮ್ಮೆ ಬೆರಳುಗಳಿಂದ ಒಪ್ಪಮಾಡಿ. ಏನೋ ಹೇಳಲು ಪ್ರಯತ್ನ ಪಡುತ್ತಾರೆ ಆದರೆ ಆಗೋದಿಲ್ಲ.. ಖುಷಿಯಿಂದ ಗಂಟಲು ಕಟ್ಟಿಬಂದದ್ದರಿಂದ ಏನೂ ಹೇಳಲು ಆಗದೆ.. ತಮ್ಮ ಹೆಬ್ಬೆರಳನ್ನು ಮೇಲಕ್ಕೆ ಮಾಡುತ್ತಾರೆ!!!
ಗುರುಗಳ ಪ್ರಶಂಸೆ ಸಿಕ್ಕಿತು.. ಅಂಕಗಳು ೧೦೦/೧೦೦ |
ಸ್ವಲ್ಪ ಹೊತ್ತು ಮೌನ.. ಗುರುಗಳು ಎದ್ದು ನಿಂತು.. ಜೋರಾಗಿ ಚಪ್ಪಾಳೆ ಹೊಡೆಯುತ್ತಾರೆ.. ಆ ಸದ್ದಿಗೆ ಮಕ್ಕಳೆಲ್ಲರೂ ಜೋರಾದ ಕರತಾಡನ ಮಾಡುತ್ತಾರೆ.. ಅಕ್ಕ ಪಕ್ಕದ ತರಗತಿಯವರೆಲ್ಲರೂ ಇದೇನಾಯಿತು ಎಂದು ಬಂದು ನೋಡಿದಾಗ.. ಅಲ್ಲಿ ನೆಡೆದ ಘಟನೆಯನ್ನು ಗುರುಗಳು ವಿವರಿಸುತ್ತಾರೆ.. ಸೂರೆ ಕಿತ್ತುಹೋಗುವಂತೆ ಚಪ್ಪಾಳೆ ಸದ್ದು..
"ಗುರುಗಳು ಅದೆಲ್ಲ ಸರಿ ಮಕ್ಕಳ.. ಈ ತಂಡದ ಬಗ್ಗೆ ನಿಮಗೆ ತಿಳಿದ ಬಗೆ ಹೇಳಿ..!"
"ಗುರುಗಳೇ.. ನಮ್ಮ ಮನೆಯಲ್ಲಿ ದಿನಪತ್ರಿಕೆಯಲ್ಲಿ ಈ ತಂಡದ ಬಗ್ಗೆ ವಿವರ ಬಂದಿತ್ತು.. ಆದರೆ ಆ ಸುದ್ದಿಯನ್ನು ಕತ್ತರಿಸಿ ಇಟ್ಟಿದ್ದೆ. .ಎಲ್ಲೊ ಕಳೆದು ಹೋಗಿದೆ.. ಆದರೆ ಅದರ ಕೆಲವು ಚಿತ್ರಗಳನ್ನು ಕತ್ತರಿಸಿ ಇಟ್ಟಿದ್ದೆ.. ಅದು ಸಿಕ್ಕಿತು.. ಇಗೋ ಇಲ್ಲಿ ನೋಡಿ"
ತಂಡದ ಗುರುತಿನ ಬಿಲ್ಲೆ |
ತಂಡದ ಸದಸ್ಯರು |
ತಂಡದ ಸದಸ್ಯರು.. !!! |
ಅಲ್ಲಿದ್ದವರಿಗೆಲ್ಲಾ ಮಾತೆ ಬರುತ್ತಿಲ್ಲ.. ಚಪ್ಪಾಳೆಯ ಸದ್ದೊಂದೇ ಕೇಳಿಸಿದ್ದು. ..
ಗುರುಗಳು ಹೇಳಿದರು "ನೋಡಿ ಮಕ್ಕಳ.. ೩ಕೆ ತಂಡ ನಿಮಗೆ ಮಾದರಿ.. ನಾವು ಎಲ್ಲಿಂದ ಬಂದಿದ್ದೀವಿ. ಹೇಗಿದ್ದೀವಿ ಎನ್ನೋದು ಮುಖ್ಯವಲ್ಲ.. ನಾವು ಯಾವ ಸಮಾಜಮುಖಿ ಕಾರ್ಯಗಳನ್ನೂ ಮಾಡುತ್ತೇವೆ, ಅದನ್ನು ಹೇಗೆ ಮಾಡುತ್ತೇವೆ ಎನ್ನೋದು ಮುಖ್ಯ.. ಈ ತಂಡಕ್ಕೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ ಹಾಗೆಯೇ ಆ ಮಹಾಮಹಿಮನು ಈ ತಂಡಕ್ಕೆ ಇನ್ನೂ ಹೆಸರು, ಯಶಸ್ಸು, ಕೀರ್ತಿ ತಂದುಕೊಡಲಿ ಎಂದು ಹಾರೈಸುತ್ತೇನೆ.. "
ಮುಖ್ಯೋಪಾಧ್ಯಾಯರು ಎಲ್ಲರನ್ನುಉದ್ದೇಶಿಸಿ "ನೋಡಿ ನನ್ನ ಸಹೋದ್ಯೋಗಿಗಳೇ, ನನ್ನ ಪ್ರೀತಿಯ ಮಕ್ಕಳೇ. ಉತ್ತಮ ಕಾರ್ಯಕ್ಕೆ ಎಂದೂ ಆ ದೈವದ ಬೆಂಬಲ ಇದ್ದೆ ಇರುತ್ತದೆ.. ಹೊರಳಿ ನೋಡದೆ ಮುಂದಡಿ ಇಟ್ಟಾಗ ಯಶಸ್ಸಿನ ಬೆಳಕು ಸದಾ ನಿಮ್ಮ ಮೇಲಿರುತ್ತದೆ.. ಈ ಸುಂದರ ಸ್ಕಿಟ್ ಮಾಡಿದ ಎಲ್ಲಾ ಮಕ್ಕಳಿಗೂ ಅಭಿನಂದನೆಗಳು.. ಹಾಗೆಯೇ ಈ ಅದ್ಭುತ ವಿವರವನ್ನು ನೀಡಲು ಪ್ರೇರೇಪಿಸಿದ ಈ ನಿಮ್ಮ ಗುರುಗಳಿಗೂ ಅಭಿನಂದನೆಗಳು.. ಎಲ್ಲರಿಗೂ ಶುಭವಾಗಲಿ.. ಪ್ರತಿಕ್ಷಣವೂ ಶುಭತರಲಿ.. "
*****
೩ಕೆ ತಂಡ.. ಈ ಗುಂಪಿನ ಪರಿಚಯವಾದದ್ದು ೨೦೧೨ರಲ್ಲಿ.. ಕವಿತೆ ಕಥನ ಎನ್ನುತ್ತಾ ಉತ್ತಮ ಕಾರ್ಯಮಾಡುತ್ತಿರುವ ಈ ತಂಡದ ಬಗ್ಗೆ ನನ್ನ ಬಾಲಭಾಷೆಯಲ್ಲಿ ಬರೆಯಬೇಕೆಂಬ ಆಸೆಗೆ ಕಾವು ಕೊಟ್ಟಿದ್ದ ಶ್ರೀ ಮಂಜುನಾಥ ಕೊಳ್ಳೇಗಾಲ ಅವರ thumbs up ಚಿತ್ರ.. ಆ ದೈವಿಕ ಪ್ರೇರಣೆ ಹೇಗಾಯಿತೋ ಗೊತ್ತಿಲ್ಲ.. ಆದರೆ ಈ ಬರಹದ ಪೂರ್ತಿ ಶ್ರೇಯಸ್ಸು ಆ ಚಿತ್ರದಲ್ಲಿರುವ ಮಹನೀಯರಿಗೆ ಸಲ್ಲಬೇಕು.. ಜೊತೆಗೆ ಇಂತಹ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ೩ಕೆ ತಂಡದ ರೂವಾರಿ ರೂಪ ಸತೀಶ್ ಅವರಿಗೂ ಮತ್ತು ತಂಡದ ಸದಸ್ಯರಿಗೂ ಸಲ್ಲಬೇಕು ಎನ್ನುವ ಆಶಯ ಹೊತ್ತು ಈ ಲೇಖನ ನಿಮ್ಮ ಮುಂದೆ ಬಂದಿದೆ..
ಉತ್ತಮ ಕಾರ್ಯಕ್ಕೆ ಭಗವಂತನ ಅನುಗ್ರಹ ಇದ್ದೆ ಇರುತ್ತದೆ.. ಅದಕ್ಕೆ ಸಾಕ್ಷಿ.. ಈ ಕೆಳಗಿನ ಚಿತ್ರ.. !!!
ಸಕಲ ಗ್ರಹ ಬಲ ನೀನೆ ಸರಸಿಜಾಕ್ಷ.. ಈ ನಿನ್ನ ಅನುಗ್ರಹದ ಬೆಳಕು ಸದಾ ೩ಕೆ ತಂಡದ ಮೇಲೆ ಇರಲಿ!!! |