Tuesday, July 9, 2013

ಒಂದು ತಂತಿ ಪರ್ಸಂಗ …. !

ಈ ಅಂಕಣಕ್ಕೆ ಏನೂ ಬರೆಯದೆ ಎರಡು ವರ್ಷಗಳೇ ಕಳೆದಿದ್ದವು..

ಒಂದು ಸುಂದರ ತಂಡ, ಹುಮ್ಮಸ್ಸಿನ ಮನಸುಳ್ಳ ತಂಡವನ್ನು ನೋಡಿದ್ದ ನೆನಪು ಬಹಳ ಕಡಿಮೆ ಇತ್ತು.

ಕಳೆದ ಕೆಲವು ತಿಂಗಳುಗಳ ಹಿಂದೆ ಭೇಟಿ ಮಾಡಿದ ರೂಪ ಸತೀಶ್ ಅವರ "3K" ತಂಡ, ಸತೀಶ್ ಬಿ ಕನ್ನಡಿಗ ಅವರ "ಹತ್ತು ಜನರಿಂದ ಒಂದೊಂದು ತುತ್ತು" ಎನ್ನುವ ತಂಡ, ಮಹೇಶ್ ಮತ್ತು ಸ್ನೇಹಿತರ ಅವರ "ಸ್ನೇಹಲೋಕ", ಅಶೋಕ್ ಶೆಟ್ಟಿ ಮತ್ತು ಸ್ನೇಹಿತರ "ನುಡಿಮುತ್ತು" ತಂಡ, ಪ್ರಕಾಶ ಹೆಗಡೆ ಅವರ "ಬಜ್ಜಿಗರು" ಈ ತಂಡಗಳಲ್ಲಿ ಅಸಾಧ್ಯ ಮನಸ್ಸಿನ ಸಾಧಕರೇ  ತುಂಬಿದ್ದಾರೆ.

ಇಂತಹ ಇನ್ನೊಂದು ಗುಂಪು "ಪಂಜು" ಎಲ್ಲಾದರು ಇರು ಎಂತಾದರು ಇರು ಎಂದಿದಿಗೂ ನೀ ಕನ್ನಡವಾಗಿರು ಎನ್ನುವ ಕುವೆಂಪು ಕವಿವಾಣಿಯಂತೆ  ನಟರಾಜು ಅವರ ಪರಿಶ್ರಮದ "ಪಂಜು"  ಕವಿಗಳನ್ನು, ಲೇಖಕರನ್ನು, ಕಥೆಗಾರರನ್ನು ಹುರಿದುಂಬಿಸುತ್ತಾ ಕನ್ನಡ ತಾಯಿಯ ಸೇವೆ ಮಾಡುತ್ತಿರುವುದು ತುಂಬಾ ಹಿತಕರ ವಿಷಯ.

http://www.panjumagazine.com/?p=3088

ಬೆಳ್ಳಿ ಹಬ್ಬದ ಸಂಚಿಕೆಯ ಸಂಭ್ರಮದಲ್ಲಿ ಪಂಜು ಪತ್ರಿಕೆ ತೇಲುತ್ತಿರುವ ಈ ಸಂದರ್ಭದಲ್ಲಿ  ಸಹೋದರ ನಟರಾಜು ಅವರಿಗೆ ಶುಭಾಶಯಗಳನ್ನು ಸಲ್ಲಿಸುತ್ತಾ.. ಇಡಿ ತಂಡಕ್ಕೆ ಅಭಿನಂದನೆಗಳನ್ನು ಹೇಳುತ್ತಾ.. ನನ್ನ ಕಿರು ಒಂದು ತಂತಿ! ಎಂಬ                                                    ಲೇಖನವನ್ನು ಈ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಪ್ರಕಟಿಸಿದ ಮಹನೀಯರಿಗೆ ಧನ್ಯವಾದಗಳನ್ನು ಹೇಳ ಬಯಸುತ್ತೇನೆ. ಜೊತೆಯಲ್ಲಿ ಸುಮಾರು ಎರಡು ವಸಂತಗಳಿಂದ ಅಜ್ಞಾತವಾಗಿದ್ದ ಈ ಅಂಕಣವನ್ನು ದಂಡೆಗೆ ಮರಳಿ ಬರುತ್ತಿದೆ ಎಂದಿನಂತೆ ಓದಿ,  ಆನಂದಿಸಿ.. ಹರಸಿ!

******************************

ಐದು ಮಂದಿ ಹಳ್ಳಿಕಟ್ಟೆಯಲ್ಲಿ ಬೀಡಿ ಸೇದುತ್ತಾ ಲೋಕಾಭಿರಾಮವಾಗಿ ಮಾತಾಡುತ್ತ ಕುಳಿತಿದ್ದರು…

"ನೀನು ಏನೇ ಹೇಳು.. ಈ ಪರ್ಪಂಚದಲ್ಲಿ ಏಟೊಂದು ಬದಲಾವಣೆ ಆಗಿ ಬಿಡ್ತು!"

"ಹೌದು ಕಣಣ್ಣ..  ಮೊದ್ಲು ಮೊದ್ಲು ಒಬ್ಬರನ್ನ ಒಬ್ಬರು ಭೇಟಿ ಮಾಡೋಕೆ ಆನಾಡಿ ಕಷ್ಟ ಪಡ್ತಾ ಇದ್ವಿ.. ಈಗ ಎಲ್ಲಾ ಚಿಟಿಕೆ ಚಿಟಿಕೆ ಹೊಡೆಯೋದರಲ್ಲಿ ಮುಗಿಯುತ್ತೆ"

"ಗುರುವೇ ನಿನಗೆ ಗೊತ್ತಾ… ಈ ಟೆಲಿಗ್ರಾಂ ಅಂದ್ರೆ ತಂತಿ ಸೇವೆ ಐತಲ್ಲ ಅದನ್ನ ನಿಲ್ಲಿಸಿ ಬಿಡ್ತಾರಂತೆ.. ಈ ತಂತಿ ಸೇವೆ ಬಗ್ಗೆ ನಿನ್ನ ಅನುಭವ ಹೇಳ್ರಣ್ಣಾ!"


"ಓಹ್ ಹೌದಾ.. ಅದರ ಬಗ್ಗೆ ಪಸಂದಾಗಿ ನಡೆದ ಒಂದು ಅನುಭವ ಐತೆ … ನಮ್ಮ ಸ್ನೇಹಿತ ರಾಮನಗರದ ವೆಂಕಿ ಗೊತ್ತಲ್ಲ .. ಅವನಿಗೆ ಹುಟ್ಟು ಹಬ್ಬಕ್ಕೆ ಒಂದು ಸುಬಾಸಯ ಹೇಳೋಣ  ಅನ್ಕಂಡಿದ್ವಿ.. "

"ಹಾ … ಮುಂದಾ!"

"ಆವಾಗ ನಾವೆಲ್ಲಾ ಓದುತಿದ್ದಾ ಕಾಲ.. ಜೇಬು ತೂತು.. ಪ್ರತಿ ಕರ್ಚಿಗೂ ಮನೆಯಲ್ಲಿ ಕೇಳಬೇಕಾದ ಕಾಲ.. ಏನೋ ಹುಚ್ಚು ಮನ್ಸು.. ವೆಂಕಿಗೆ ಶುಭಾಷಯ ಹೇಳೋಕೆ ತಂತಿ ಕಳಿಸೇ ಬಿಡೋಣ ಅಂತ ಅಂಚೆ ಕಚೇರಿಗೆ ಹೋದ್ವಿ… "

"ಹಾ ಆಮ್ಯಾಕೆ"

"ಅಲ್ಲಿದ್ದ ಒಂದು ವಮ್ಮನ ಕೇಳಿದ್ವಿ.. ಆಕೆ ಒಂದು ಪಾರಂ ಕೊಟ್ಳು.. ತುಂಬಿ ಕೊಡಿ ಅಂಥಾ"

"ಹಾ"

"ನಾವು ಮಹಾಭಾರತ ಬರೆದಂಗೆ ನಮ್ಮ ತಲೇಲಿದ್ದದನೆಲ್ಲ ಆ ಪಾರಂನಲ್ಲಿ  ತುಂಬಿ.. ನಮ್ಮ ಸುಬಾಸಯ ಸಂದೇಸ ಬರ್ದು ಕೊಟ್ವಿ… ಎಟಾಯ್ತದೆ ನೋಡವ್ವಾ ಅಂತ ಕೇಳಿದ್ವು … ಆ ವಮ್ಮ ಅದನ್ನ ದಿನಪತ್ರಿಕೆ ಓದ್ದಂಗೆ ಓದ್ತಾ.. ಇದಕ್ಕೆ ೯೫ ರುಪಾಯ್ ಆಯ್ತದೆ ಅಂದ್ಲು… ನಾವೆಲ್ಲಾ ಚಡ್ಡಿ ಜೇಬಿಂದ ಹಿಡಿದು.. ನಮ್ಮ ಚೀಲ ಎಲ್ಲ ತಡಕಾಡಿದಾಗ ಸಿಕ್ಕದ್ದು ೮೦ ರುಪ್ಪಾಯಿ…

"ಆಮ್ಯಾಕೆ… "

"ಮ್ಯಾಡಂ… ನಮ್ತಾವ ಬರಿ ೮೦ ರುಪಾಯಿ ಮಾತ್ರವ ಇರೋದು.. ಏನ್ ಮಾಡೋದು ಅಂದದಕ್ಕೆ ಆ ವಮ್ಮ .. ನಿಮ್ಮ ಸುಬಾಸಯ ಸಂದೇಸ ವಸಿ ತುಂಡು ಮಾಡಿ.. ಪ್ರತಿ ಪದಕ್ಕೆ ಇಷ್ಟು ದುಡ್ದಾಯ್ತದೆ ಅಂತು.. "

"ಹೂಂ…"

"ಸರಿ ಇನ್ನೇನ್ ಮಾಡೋದು.. ಹಂಗೆ ಮಾಡಿ ನಾವು ಹೇಳಬೇಕಾದ್ದು ಬರಿ ಸುಬಾಸಯ ತಾನೇ.. ಹುಟ್ಟು ಹಬ್ಬಕ್ಕೆ ಸುಬಾಸಯ ಅಂತ ಅದನ್ನ ತಿದ್ದಿ.. ಕೊಟ್ವಿ.. ನಮ್ಮತ್ರ ಇದ್ದಾ ದುಡ್ಡು ಸರಿ ಹೋಯ್ತು.. "

"ಮುಂದಿದ್ದು ನಂಗೊತ್ತು" ಅಂದ ಇನ್ನೊಬ್ಬ ಸೇದುತಿದ್ದ ಬೀಡಿಯ ಕೊನೆ ದಂ ಎಳೆದು!

"ಹೊಟ್ಟೆ ಹಸಿತಾ ಇತ್ತು.. ಇದ್ದ ಬದ್ದ ದುಡ್ಡೆಲ್ಲ ತಂತಿಗೆ ಸುರಿದು.. ತಂತಿ ಕಳಿಸಿ ..... ಖಾಲಿ ಹೊಟ್ಟೆ ಹಿಡಿದುಕೊಂಡು ಮನೆಗೆ ಹೋದ್ವಿ.. "


"ಮನೆಗೆ ಹೋದ್ರೆ.. ಈ ಬಡ್ಡಿ ಹೈದ ವೆಂಕಿ ಮನೆ ತಾವ ಕಾಯ್ತಾ ಅವ್ನೆ!"

"ನಮಗೆಲ್ಲ ಒಂದು ಕಡೆ ಕುಸಿ.. ಇನ್ನೊಂದು ಕಡೆ ಅನ್ಯಾಯವಾಗಿ ತಂತಿ ಕಳ್ಸಿ ಇದ್ದ ಬದ್ದ ದುಡ್ಡೆಲ್ಲ ಖಾಲಿ ಮಾಡಿಕೊಂಡು ಬಂದ್ರೆ … ಈ ಮಗ ಬೆಂಗಳೂರಿಗೆ ಬಂದವ್ನೆ ಅಂತ ಕೋಪ"

"ಏನೋ ಮಾಡೋದು.. ಆ ವಸಿ ಕೋಪ…  ವಸಿ ಕುಸಿಯಲ್ಲಿ ಮಾತಾಡ್ತಾ ಕುಂತ್ವಿ.. ಮತ್ತೆ ಕುಸಿ ಕುಸಿಯಾಗಿ ಮತ್ತೊಮ್ಮೆ ಸುಬಾಸಯ ಕೋರುತ್ತಾ.. ಮನೆಯಲ್ಲಿ ಅಮ್ಮ ಮಾಡಿದ್ದ ಪೊಗದಸ್ತಾದ ಅಡಿಗೆಯನ್ನ ಚಪ್ಪರಿಸಿಕೊಂದು ತಿಂದ್ವಿ"

"ಏನೇ ಆಗಲಿ.. ನಮ್ಮ ಗೆಳೆತನದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ನಾವು ಮೊದಲು ಹಾಗು ಕಡೆ ಬಾರಿ ಕಳಿಸಿದ ತಂತಿ ಅವಾಂತರವನ್ನು ಇವತ್ತು ನೆಪ್ಪು ಮಾಡ್ಕಂಡು ನಗ್ತಾ ಇರ್ತೀವಿ.. ಅಂತ ತಂತಿ ಸೇವೆ ಇನ್ನೊಂದು ಹದಿನೈದು ಇಪ್ಪತ್ತು ದಿನದಲ್ಲಿ ನಿಂತು ಹೋಗುತ್ತೆ ಅಂದ್ರೆ ಬೇಸರವಾಯ್ತದೆ.. ಆಗಲಿ ಜಗತ್ತಲ್ಲಿ ಯಾವ್ದು ತಾನೇ ಸಾಸ್ವಾತ ಅಲ್ವ"


************************* 

ಅರೆ ಅಣ್ಣಾ ನಿನಗೆ ಗೊತ್ತಾ.. ನಮ್ಮ ಗೆಳೆತನ ಬೆಳೆದು ನಿಂತು ಇಪ್ಪತೈದು ವರ್ಸ ಆಯಿತು ಹಾಗೆಯೇ ನಮ್ಮ ನಟರಾಜಣ್ಣ ಮತ್ತು ತಂಡದ "ಪಂಜು" ಇ-ಪತ್ರಿಕೆ ಕೂಡ ಸುರುವಾಗಿ ಇಪ್ಪತ್ತೈದು ವಾರಗಳು ಆಯಿತು… ಎಂತಹ ಸಂತಸ ಸಮಾಚಾರ ಅಲ್ವ…"

"ಬನ್ರಣ್ಣ ನಾವೆಲ್ಲಾ ಸೇರಿ ಕನ್ನಡ ತಾಯಿಯ ಸೇವೆ ಮಾಡುತ್ತಾ ಕನ್ನಡದ ಕಂಪನ್ನು ಜಗತ್ತಿನೆಲ್ಲೆಡೆ ಬೆಳಗುಸುತ್ತಿರುವ "ಪಂಜು" ತಂಡಕ್ಕೆ ಸುಬಾಸಯ ಕೋರುತ್ತ ಅವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ"

"ಪ್ರೀತಿಯ ನಟಣ್ಣ.. ನಿಮ್ಮ ಅಭಿಮಾನದ ಪಂಜು ಸದಾ ಬೆಳಗುತ್ತಲಿರಲಿ ಹಾಗೆಯೇ ಇದರ ಪ್ರಕಾಸದಲ್ಲಿ ಅನೇಕ ಲೇಖಕರು, ಕವಿಗಳು ಬೆಳಗಲಿ ಕೀರ್ತಿಸಾಲಿಗಳಾಗಲಿ.. ಮತ್ತೊಮ್ಮೆ ಇಪ್ಪತ್ತೈದು ವಾರಗಳ ಸವಿ ನೆನಪಲ್ಲಿ ಪಂಜು ತಂಡಕ್ಕೆ ಅಭಿನಂದನೆಗಳು"